ವಿದುರ -
	ಮಹಾಭಾರತದ ಒಂದು ಪ್ರಮುಖ ಪಾತ್ರ. ವಿಚಿತ್ರವೀರ್ಯನ ಹೆಂಡತಿ ಅಂಬಿಕೆಯ ದಾಸಿಯಲ್ಲಿ ವ್ಯಾಸಮಹರ್ಷಿಯಿಂದ ಜನಿಸಿದವ. ಯಮನ ಅಂಶಸಂಭೂತ. ಅಣಿಮಾಂಡವ್ಯ, ಪಾರಸವಿ ಈತನ ಹೆಂಡತಿ ಯರು. ಪಾಂಡವರು ಹಸ್ತಿನಾವತಿಯಿಂದ ವಾರಣಾವತಕ್ಕೆ ಹೊರಟಾಗ ಮ್ಲೇಚ್ಛ ಭಾಷೆಯಲ್ಲಿ ಅರಗಿನ ಮನೆಯ ಗುಟ್ಟನ್ನು ತಿಳಿಸುತ್ತಾನೆ. ಅಲ್ಲದೆ, ಕೌರವರಿಗೆ ತಿಳಿಯದಂತೆ ಅರಗಿನಮನೆಗೆ ಸುರಂಗಮಾರ್ಗ ಮಾಡಿಸುತ್ತಾನೆ. ಪಾಂಡವರನ್ನು ಕಾಡಿಗಟ್ಟಿದಾಗ ಧೃತರಾಷ್ಟ್ರನಿಗೆ ನೀತಿ ಹೇಳುತ್ತಾನೆ. ಕೊನೆಗೆ ಬೇಸರಗೊಂಡು ಪಾಂಡವರಿದ್ದಲ್ಲಿಗೆ ಹೋದಾಗ ಧರ್ಮರಾಯ ಇವನನ್ನು ಮರಳಿ ಧೃತರಾಷ್ಟ್ರನ ಬಳಿಗೆ ಕಳುಹಿಸುತ್ತಾನೆ. ಪಾಂಡವರ ಜೊತೆ ಸಂಧಿಮಾಡಿಕೊಳ್ಳಲು ಧೃತರಾಷ್ಟ್ರನಿಗೆ ಸಲಹೆಮಾಡು ತ್ತಾನೆ. ಕೃಷ್ಣ ಹಸ್ತಿನಾವತಿಗೆ ರಾಯಭಾರಕ್ಕೆ ಬಂದಾಗ ವಿದುರನ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಕೌರವ ಮತ್ತು ಪಾಂಡವರಿಗೆ ಯುದ್ಧ ಸಂಭವಿಸುವುದೆಂದು ತಿಳಿದು ಬೇಸತ್ತು ತೀರ್ಥಯಾತ್ರೆಗೆ ಹೋಗಿಬರು ತ್ತಾನೆ. ಧೃತರಾಷ್ಟ್ರನ ಜೊತೆಯಲ್ಲೇ ಇದ್ದು ಅವನಿಗೆ ಪ್ರತಿಹಂತದಲ್ಲೂ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ. ಇವನ ಉಪದೇಶಗಳು ವಿದುರ ನೀತಿಯೆಂದು ಲೋಕಪ್ರಸಿದ್ಧವಾಗಿದೆ. ಬದುಕಿನ ಕೊನೆಯಲ್ಲಿ ಪ್ರಭಾಸಕ್ಷೇತ್ರದಲ್ಲಿ ಸ್ವಾತ್ಮಾರಾಮನಾಗಿ ಮೆರೆದು ದೇಹತ್ಯಾಗಮಾಡುತ್ತಾನೆ.					
				(ಬಿ.ಎನ್.ಎನ್.ಬಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ